ಕೆಪ್ಲರ್, ಯೋಹಾನ್
1571-1630. ಜರ್ಮನಿಯ ಖಗೋಳ ವಿಜ್ಞಾನಿ.  ಅದುವರೆಗೆ ವಿವರಣಾತ್ಮಕ ಶಾಸ್ತ್ರವೆಂದು ಪರಿಗಣಿಸಲ್ಪಟ್ಟಿದ್ದ ಖಗೋಳ ವಿಜ್ಞಾನವನ್ನು ಭೌತಶಾಸ್ತ್ರದ ಭದ್ರ ತಳಪಾಯದ ಮೇಲೆ ಸ್ಥಾಪಿಸಿ ಇದರ ಸರ್ವತೋಮುಖ ಶಾಸ್ತ್ರೀಯ ವಿಸ್ತರಣೆಗೆ ನಾಂದಿ ಹಾಕಿದ ಯುಗಪ್ರವರ್ತಕ ಮೇಧಾವಿ.  ಮುಖ್ಯವಾಗಿ, ಸೌರವ್ಯೂಹದ ಕ್ರಿಯಾತಂತ್ರವನ್ನು ಮೂರು ಮೂಲ ಭೂತ ಹಾಗೂ ಬಲು ಸರಳ ನಿಯಮಗಳಿಂದ ವಿವರಿಸಿದ್ದು ಈತನ ಮಹತ್ತಮ ಕೊಡುಗೆ.        (ನೋಡಿ- ಕೆಪ್ಲರನ-ನಿಯಮಗಳು)

ಬಾಲ್ಯ: ಸೈನಿಕ ತಂದೆ, ಅವಿದ್ಯಾವಂತ ತಾಯಿ, ಈ ಬಡ ಕುಟುಂಬದಲ್ಲಿ ಯೋಹಾನನ ಜನನ (ಡಿಸೆಂಬರ್ 27, 1571).  ಇವನೇ ಅವರ ಮೊದಲ ಮಗು.  ಬಡತನ, ಅನಾರೋಗ್ಯ, ಜನ್ಮದಾತರ ಅನಾಸ್ಥೆ ಇವುಗಳ ದುಷ್ಪರಿಣಾಮ ತೀವ್ರವಾಗಿದ್ದಾಗಲೇ ನಾಲ್ಕು ವರ್ಷದ ಯೋಹಾನನಿಗೆ ಸಿಡುಬುರೋಗ ಬಂದಿತು.  ಆಗ ಇವನು ಬದುಕಿ ಉಳಿದದ್ದು ಒಂದು ಪವಾಡ.  ಈ ಕಾಯಿಲೆಯ ಪರಿಣಾಮವಾಗಿ ಇವನ ಅವಯವಗಳು ದುರ್ಬಲವಾದುವು, ದೃಷ್ಟಿ ಮಂದವಾಯಿತು.  ಆ ಎಳೆ ಪ್ರಾಯದಲ್ಲಿ ಕಠಿನ ದೇಹ ಶ್ರಮದ ಕೆಲಸಗಳನ್ನು ಈತ ಮಾಡಿ ಸಂಸಾರದ ಪೋಷಣೆಗೆ ನೆರವಾಗಬೇಕಾಗಿತ್ತು.  ಅಲ್ಲದೇ ಸಂಸಾರ ಊರಿಂದೂರಿಗೆ ಜೀವನೋಪಾಯಕ್ಕಾಗಿ ಅಲೆಯುತ್ತಿತ್ತು.  ಮುಂದೊಂದು ದಿವಸ ಹೈನ್ರಿಕ್ ಕೆಪ್ಲರ್ (ಯೋಹಾನನ ತಂದೆ) ಯಾರಿಗೂ ತಿಳಿಸದೇ ಊರು ಬಿಟ್ಟು ಓಡಿ ಹೋದ (1588).  ಹೀಗಾಗಿ ಸಾಂಪ್ರದಾಯಿಕ ಓದುಬರೆಹಗಳಲ್ಲಿ ಯೋಹಾನ್ ಸಾಧಿಸಿದ ಪ್ರಗತಿ ತೀರ ಅಲ್ಪ.
ವಿದ್ಯಾಭ್ಯಾಸ:  ಪ್ರಾಟೆಸ್ಟಂಟ್ ಧರ್ಮ (ಸ್ಥಾಪನೆ 1529) ಯೂರೋಪ್ ಖಂಡದಲ್ಲಿ, ಅದರಲ್ಲೂ ಪ್ರಸಾರವಾಗುತ್ತಿದ್ದ ಕಾಲವದು.  ಕೆಪ್ಲರನ ಮನೆತನದವರು ಈ ಪಂಥದ ಅನುಯಾಯಿಗಳು.  ಪ್ರಾಟೆಸ್ಟಂಟ್ ಮತಪ್ರಚಾರಕ್ಕಾಗಿ ಧಾರ್ಮಿಕ ಗುರುಗಳ ಶಿಕ್ಷಣಕ್ಕೋಸ್ಕರ ಹಲವಾರು ಮಿಷನರಿಗಳನ್ನು ಸ್ಥಾಪಿಸಲಾಗಿತ್ತು.  ಅಡೆಲ್‍ಬರ್ಗ್ ಎಂಬಲ್ಲಿದ್ದ ಇಂಥ ಒಂದು ಸೆಮಿನರಿಗೆ ಯೋಹಾನನಿಗೆ ಪ್ರವೇಶ ದೊರೆತಾಗ (1584)  ಇವನ ಜೀವನದ ಎರಡು ಮುಖ್ಯ ಸಮಸ್ಯೆಗಳು ಪರಿಹಾರವಾಗಿದ್ದುವು:  ಒಂದು-ನೆಲೆ, ಎರಡು-ಭವಿಷ್ಯದಲ್ಲಿ ನಿರ್ದಿಷ್ಟ ವೃತ್ತಿ.  ಆ ಸೆಮಿನರಿಯಲ್ಲಿ ಯೋಹಾನನಿಗೆ ಶಿಕ್ಷಣ ದೊರೆತದ್ದು ಧಾರ್ಮಿಕ ವಿಷಯಗಳಲ್ಲಿ; ಅನುಷಂಗಿಕವಾಗಿ ಸಾಹಿತ್ಯ, ಒಂದಿಷ್ಟು ಅಂಕಗಣಿತ ಇವುಗಳ ಅಧ್ಯಯನವೂ ಇತ್ತು.  ಕೆಪ್ಲರನ ನಿಶಿತಮತಿ ಇವುಗಳಲ್ಲೆಲ್ಲ ಪ್ರವೀಣ್ಯ ಸಾಧಿಸಿತು.  ಶ್ರದ್ಧೆ, ಕಠಿಣ ಪರಿಶ್ರಮ, ಚಿಂತನಪರತೆ, ವಿಧೇಯತೆ, ಕೆಲಸಕಾರ್ಯಗಳಲ್ಲಿ ಅಚ್ಚುಗಟ್ಟು ಇವೇ ಇವನ ಬಂಡವಾಳ.  ಅನಾರೋಗ್ಯದೊಡನೆ ನಿರಂತರ ಹೋರಾಟ ಮುಂದುವರಿದುಕೊಂಡೇ ಹೋಯಿತು.  ಮುಂದೆ ಸ್ನಾತಕ ಶಿಕ್ಷಣಕ್ಕಾಗಿ ಕೆಪ್ಲರನನ್ನು ಟ್ಯುಬಿಂಗನಿನ ಸ್ಟಿಫ್ಟ್ ಸೆಮಿನರಿಗೆ ಕಳಿಸಿದರು (1589). ಅಲ್ಲಿ ಮ್ಯಾಸ್‍ಟ್ಲಿನ್ ಎಂಬ ಸುವಿಖ್ಯಾತ ಖಗೋಳವಿಜ್ಞಾನಿ ಮತ್ತು ಶ್ರೇಷ್ಠ ಬೋಧಕನ ಪ್ರಭಾವ ಈತನ ಮೇಲೆ ಬಿತ್ತು.  ಆತನ ಅಂತರಂಗದ ಶಿಷ್ಯನಾದ ಕೆಪ್ಲರ್ ಖಗೋಳವಿಜ್ಞಾನದ ಅದುವರೆಗಿನ ಪ್ರವಾಹವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ಕಲಿತದ್ದು ಮಾತ್ರವಲ್ಲ; ಅದರ ವಹನದಲ್ಲಿ ಟಾಲೆಮಿ ಮತ್ತು ಕೊಪರ್ನಿಕಸ್ ಎಂಬ ವಿಜ್ಞಾನಿಗಳ ಕೊಡುಗೆಗಳ ಅರ್ಥಸ್ವಾರಸ್ಯವನ್ನು ಗ್ರಹಿಸಿದ ಕೂಡ.  ಟಾಲೆಮಿಯ ಭೂಮಿಕೇಂದ್ರವಾದವನ್ನು ಪರಿಷ್ಕಾರವಾಗಿ ಸ್ಥಾನಾಂತರಗೊಳಿಸಿದ್ದ ಕೊಪರ್ನಿಕಸನ ಸೂರ್ಯಕೇಂದ್ರವಾದದ ನಿಷ್ಕøಷ್ಟತೆಗೆ, ಬೌದ್ಧಿಕ ಸೌಂದರ್ಯಕ್ಕೆ ತರುಣ ಕೆಪ್ಲರ್ ಮಾರುಹೋದ.  ಸೂರ್ಯನಲ್ಲಿರುವ ಏನೋ ಒಂದು ವಿಶೇಷ ಬಲದ ಪರಿಣಾಮವಾಗಿ ಎಲ್ಲ ಗ್ರಹಗಳ ಕ್ರಮಬದ್ಧ ಚಲನೆ ಸಂಭವಿಸುತ್ತಿದೆ ಎಂದು ಕೆಪ್ಲರನ ಪ್ರತಿಭೆ ಅಂದು (1589-91) ಮಿಡಿಯುತ್ತಿತ್ತು.  1591ರಲ್ಲಿ ಮಾಸ್ಟರ್ಸ್ ಪದವಿಯನ್ನು ದ್ವಿತೀಯಸ್ಥಾನ ಪಡೆದು ಗಳಿಸಿದ.  ಇವನ ಧಾರ್ಮಿಕ ಶಿಕ್ಷಣ ಮತ್ತೆಯೂ ಮುಂದುವರಿಯಬೇಕಾಗಿತ್ತು.  ಆದರೆ ಅಷ್ಟರಲ್ಲಿಯೇ ವರಿಷ್ಠರ ಆದೇಶದ ಪ್ರಕಾರ ಈತ ಗ್ರಾಟ್ಸ್ ನಗರದಲ್ಲಿದ್ದ ಪ್ರಾಟೆಸ್ಟಂಟ್ ಸೆಮಿನರಿಗೆ ಹೋಗಿ ಗಣಿತಾಧ್ಯಾಪಕನಾಗಿ ಸೇರಬೇಕಾಯಿತು (1594).

ವೃತ್ತಿ:  ಗ್ರಾಟ್ಸ್‍ನಲ್ಲಿ ಕೆಪ್ಲರ್ ಜಿಲ್ಲಾ ಗಣಿತಜ್ಞ.   ಪಂಚಾಂಗಕಾರ ಮತ್ತು ಗಣಿತಾಧ್ಯಾಪಕನಾಗಿ ಸೇವೆ ಸಲ್ಲಿಸಲು ತೊಡಗಿದ.  ಖಗೋಳಶಾಸ್ತ್ರಾಭ್ಯಾಸ ಈಗ ಇವನ ಪ್ರಿಯ ಹವ್ಯಾಸ.  ಸೌರವ್ಯೂಹದಲ್ಲಿ ಆರು ಗ್ರಹಗಳೇ ಏಕಿರಬೇಕು, ಸೂರ್ಯನಿಂದ ಆ ಗ್ರಹಗಳ ದೂರಗಳು (ಇವು ತಿಳಿದಿದ್ದುವು) ಅಷ್ಟೇ ಏಕಿರಬೇಕು ಇವೇ ಮುಂತಾದ ಸಂಶಯಗಳಿಗೆ ಇವನು ಉತ್ತರ ಅರಸುತ್ತ ಹಿಂದಿನಿಂದ ಬಂದು ಉಪಲಬ್ಧವಾಗಿದ್ದ ಎಲ್ಲ ಖಗೋಳವೀಕ್ಷಣಾ ವರದಿಗಳನ್ನೂ ಅಭ್ಯಾಸ ಮಾಡಿದ.  ಇದರ ಫಲವಾಗಿ ಸೌರವ್ಯೂಹದ ಒಂದು ಜ್ಯಾಮಿತೀಯ ಪ್ರರೂಪವನ್ನು ರಚಿಸಿ ಅದನ್ನು ಸೌರವ್ಯೂಹದ ವಿವರಗಳಿಗೆ ಹೊಂದಿಸುವಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಪಡೆದ (1595).  ಇವೆಲ್ಲ ಸಂಶೋಧನೆಗಳ ಫಲವನ್ನು ಒಂದು ಗ್ರಂಥರೂಪದಲ್ಲಿ ಬರೆದು ಮುಗ್ರಿಸಿ ಅದನ್ನು ವಿದ್ವಜ್ಜನರಿಗೆ ವಿಮರ್ಶೆಗೋಸ್ಕರ ಕಳಿಸಿದ.  ಗೆಲಿಲಿಯೋ ಮತ್ತು ಬ್ರಾಹೆ ಈ ಸಮಕಾಲೀನ ವಿಜ್ಞಾನಿಗಳ ಪರಿಚಯ ಈ ಮೂಲಕ ಕೆಪ್ಲರನಿಗೆ ಆಯಿತು.  
ಟೈಕೊ ಬ್ರಾಹೆಯ ಒಡನಾಟ:  ಮತೀಯ ವೈಷಮ್ಯದಿಂದ ಕಲುಷಿತವಾಗಿದ್ದ ಗ್ರಾಟ್ಸ್ ನಗರದ ವಾಸ್ತವ್ಯ ಕೆಪ್ಲರನಿಗೆ ಹಿತವೆನಿಸಲಿಲ್ಲ.  1597ರಲ್ಲಿ ಆತ ಶ್ರೀಮಂತ ವಿಧವೆಯೋರ್ವಳನ್ನು ಮದುವೆಯಾಗಿ ಸಂಸಾರಿಗನಾದ.  ಇದರಿಂದ ಅಧಿಕ ಹೊಣೆ ಇವನ ಮೇಲೆ ಬಿತ್ತು.  ಟೈಕೊ ಬ್ರಾಹೆಯ ಆಹ್ವಾನವನ್ನು ಮನ್ನಿಸಿ ಇವನು ಪ್ರೇಗ್ ನಗರದಲ್ಲಿದ್ದ ಬ್ರಾಹೆಯ ವೀಕ್ಷಣ ಮಂದಿರದಲ್ಲಿ ಆತನ ಸಹಾಯಕನಾಗಿ ಸೇರಿದ (1600).  ಮುಂದೆ, ಟೈಕೊಬ್ರಾಹೆಯ ವೀಕ್ಷಣಾಲಯದ ಅಧಿಕಾರ ಪ್ರಾಪ್ತವಾದುದರ ಜೊತೆಗೆ, ಆತನ ಖಗೋಳ ವೀಕ್ಷಣವರದಿಗಳ ಮಹಾ ಸಂಗ್ರಹಾಗಾರಕ್ಕೆ ಮುಕ್ತ ಪ್ರವೇಶ ದೊರೆಯಿತು.  ಕೆಪ್ಲರನನ್ನು ಟೈಕೊ ಬ್ರಾಹೆಯ ಉತ್ತರಾಧಿಕಾರಿಯಾಗಿ ಚಕ್ರವರ್ತಿ ನೇಮಿಸಿದನಾದರೂ ಸಂಬಳವನ್ನು ಸಕಾಲಕ್ಕೆ ಕೊಡುತ್ತ್ತಿರಲಿಲ್ಲ.  ಇದರಿಂದಾಗಿ ಜೀವನಕ್ಕೆ ಕೆಪ್ಲರ್ ಜ್ಯೋತಿಷವನ್ನು ಆಶ್ರಯಿಸಿದ.  ಮೊದಲಿನಿಂದಲೂ ಇವನಿಗೆ ಜ್ಯೋತಿಷದಲ್ಲಿ ಬಹಳ ಆಸಕ್ತಿಯಿತ್ತು.  ಹೀಗಾಗಿ ಟಾಲೆಮಿ ಮತ್ತು ಕರ್ಡನರು ಸೂಚಿಸಿದ್ದ ನಿಯಮಗಳನ್ನು ವ್ಯಾಸಂಗ ಮಾಡಿದ.  ಜ್ಯೋತಿಷವನ್ನು ಖಗೋಳವಿಜ್ಞಾನದಲ್ಲಿ ಆಗಾಗ ಉಪಯೋಗಿಸಿಕೊಂಡು ಜಾತಕಗಳನ್ನು ಬರೆದು ಫಲ ಹೇಳಿ ಹಣ ಪಡೆದು ಜೀವಿಸುತ್ತಿದ್ದ.  ಒಂದು ಕಡೆ ಕೆಪ್ಲರ್ ಹೀಗೆ ಬರೆದಿದ್ದಾನೆ `ಜ್ಯೋತಿಷ ಒಂದು ದೊಡ್ಡ ಅವಿವೇಕದ ಮಗು.  ಆದರೆ, ಓ, ದೈವವೆ! ಅತಿ ವಿವೇಕಿಯಾದ ಖಗೋಳಶಾಸ್ತ್ರ ತನ್ನ ಉನ್ಮತ್ತ ಮಗುವನ್ನು ಬಿಟ್ಟಿರಲು ಹೇಗೆ ಸಾಧ್ಯ?  ಗಣಿತಶಾಸ್ತ್ರಜ್ಞರ ಸಂಬಳಗಳು ಬಹು ಕಡಿಮೆಯಾದುದರಿಂದ, ಜ್ಯೋತಿಷದ ಸಹಾಯದಿಂದ ಹೊಟ್ಟೆ ಹೊರೆಯದಿದ್ದರೆ, ವಿಜ್ಞಾನಿ ಖಂಡಿತವಾಗಿಯೂ ಹಸಿವಿನಿಂದಲೇ ಇರಬೇಕು.
ಖಗೋಳವಿಜ್ಞಾನದಲ್ಲಿ ಸಂಶೋಧನೆ:  ಕೆಪ್ಲರನ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸಿದ್ದು ಮಂಗಳಗ್ರಹದ ವಿಪರೀತ ವರ್ತನೆ.
ಈ ಗ್ರಹವನ್ನು ಕುರಿತ ಮಾಹಿತಿಗಳನ್ನು ಒಂದು ಸುಸಂಗತ ಸಿದ್ಧಾಂತರೂಪಕ್ಕೆ ತರುವುದು ಕೆಪ್ಲರನ ಮುಂದಿದ್ದ ಪ್ರಶ್ನೆ.  ಸೌರವ್ಯೂಹವನ್ನು ಕುರಿತ ವಿವರಣೆಯಾದ ಸೂರ್ಯಕೇಂದ್ರವಾದದಲ್ಲಿ ಸೂರ್ಯನ ಸ್ಥಾನ ವೃತ್ತಕೇಂದ್ರ.  ಭಿನ್ನ ಏಕಕೇಂದ್ರೀಯ ವೃತ್ತಗಳಲ್ಲಿ ಭಿನ್ನ ಕಕ್ಷಾವೇಗಗಳಿಂದ ಸೂರ್ಯನ ಸುತ್ತ ಗ್ರಹಗಳು ಪರಿಭ್ರಮಿಸುತ್ತಿವೆ ಎಂಬುದು ಆ ವಾದದ ಸಾರ.  ಕೆಪ್ಲರ್ ಒಂದು ದಿಟ್ಟ ಹೆಜ್ಜೆಯನ್ನು ಮುಂದಿಟ್ಟು ಸೂರ್ಯನ ಸ್ಥಾನವನ್ನು ಕೇಂದ್ರದಿಂದ ವಿಚಲಿತಗೊಳಿಸಿದ.  ಈಗ ಸೂರ್ಯನ ಸ್ಥಾನ ವೃತ್ತದ ಒಂದು ವ್ಯಾಸದ ಮೇಲೆ ಕೇಂದ್ರವಲ್ಲದ ಒಂದು ಬಿಂದು (S).  ಕೇಂದ್ರದಿಂದ (ಔ) ಸೂರ್ಯನ ದೂರ ಔSಗೆ ಗ್ರಹದ ಕಕ್ಷೆಯ (ಇದು ವೃತ್ತ ಪರಿಧಿ) ಉತ್ಕೇಂದ್ರತೆ ಎಂದು ಹೆಸರು.  

ಚಿತ್ರ-1

ಮಂಗಳದ ಚಲನೆಯನ್ನು ಅಭ್ಯಸಿಸಲು ಕೆಪ್ಲರ್ ಂಔSಉ ವ್ಯಾಸ ಆಧಾರ ರೇಖೆಯಾಗಿರುವಂತೆ Sನ್ನು ಕುರಿತು ವೃತ್ತವನ್ನು ಹಲವಾಗು ಸಮ ಸಲೆಗಳಿರುವ ಖಂಡಗಳಾಗಿ ವಿಭಾಗಿಸಿದ.  ಎಂದರೆ, ಖಂಡ Sಂಃ=ಖಂಡ Sಃಅ=ಖಂಡ Sಅಆ=ಖಂಡ Sಆಇ=ಖಂಡ Sಇಈ=ಖಂಡ Sಈಉ.  ಈ ದಿಶೆಯಲ್ಲಿ ಸಾಗಿದ ಅವನ ಅಧ್ಯಯನ ಮಂಗಳಕ್ಕೆ ಂ ಯಿಂದ ಃಗೆ, ಃಯಿಂದ ಅಗೆ, ಅಯಿಂದ ಆಗೆ, ಆಯಿಂದ ಇಗೆ, ಇಯಿಂದ ಈಗೆ, ಈನಿಂದ ಉಗೆ ಇತ್ಯಾದಿ ಸಾಗಲು ಬೇಕಾಗುವ ಕಾಲಗಳು ಪರಸ್ಪರ ಸಮವಾಗಿವೆ ಎಂಬ ಹೊಸ ಅಂಶವನ್ನು ಪ್ರಕಟಪಡಿಸಿತು.  (ಈ ಕಂಸಗಳ ಉದ್ದಗಳು ಅಸಮವೆಂಬುದನ್ನು ಗಮನಿಸಬೇಕು).  ಆದ್ದರಿಂದ ಮಂಗಳ ಸೂರ್ಯನನ್ನು ಕುರಿತಂತೆ ಸಮಸಲೆಗಳನ್ನು ಸಮಕಾಲಗಳಲ್ಲಿ ರೇಖಿಸುವುದು ಎಂದಾಯಿತು.  ಇದೇ ಕೆಪ್ಲರನ ಎರಡನೆಯ ನಿಯಮ.  ಐತಿಹಾಸಿಕವಾಗಿ ಇದೇ ಮೊದಲು ಆದ ಆವಿಷ್ಕಾರ.  ಮಂಗಳದ ಚಲನೆಯನ್ನು ಕುರಿತು ನೀಡಿದ ಈ ವಿವರಣೆಯನ್ನು ಸಾರ್ವತ್ರೀಕರಿಸುವಲ್ಲಿ ಕೆಪ್ಲರ್ ಗಣಿತವಿಧಾನಗಳನ್ನು ಬಹುವಾಗಿ ಅವಲಂಬಿಸಬೇಕಾಯಿತು.  ಅವನ ಅನ್ವೇಷಣೆಯ ಫಲವಾಗಿ ಮುಂದೆ 1605ರಲ್ಲಿ ಸೌರವ್ಯೂಹವನ್ನು ಕುರಿತ ಇನ್ನೊಂದು ನಿಯಮ ಬೆಳಕನ್ನು ಕಂಡಿತು.  ಇದು ಕೆಪ್ಲರನ ಮೊದಲನೆಯ ನಿಯಮ.  ಇದರ ಪ್ರಕಾರ ಒಂದೊಂದು ಗ್ರಹವೂ ಸೂರ್ಯನ ಸುತ್ತ ಒಂದೊಂದು ದೀರ್ಘವೃತ್ತದ ಮೇಲೆ, ಸೂರ್ಯ ಆ ದೀರ್ಘವೃತ್ತದ ಒಂದು ನಾಭಿಯಲ್ಲಿ ಇರುವಂತೆ, ಪರಿಭ್ರಮಿಸುತ್ತಿದೆ.  ಕೆಪ್ಲರನ ಮೂರನೆಯ ನಿಯಮದ ಆವಿಷ್ಕಾರವಾದದ್ದು 1618ರಲ್ಲಿ.  ಅದರ ಪ್ರಕಾರ (ಗ್ರಹಗಳ) ಅವಧಿ ಕಾಲಗಳ ವರ್ಗಗಳು (ಸೂರ್ಯನಿಂದ ಗ್ರಹಗಳ) ಸರಾಸರಿ ದೂರಗಳ ಘನಗಳ ಅನುಪಾತದಲ್ಲಿವೆ.

ಜೀವನ:  ತೀರ ಸಾತ್ತ್ವಿಕ ಸ್ವಭಾವದ ಕೆಪ್ಲರನ ವೈಯುಕ್ತಿಕ ಜೀವನ ಬಡತನ, ಕಾಯಿಲೆ, ಗೃಹ ತಾಪತ್ರಯ, ಮತೀಯ ವೈಷಮ್ಯಗಳಿಂದ ಒದಗಿದ ಮಾನಸಿಕ ಜಂಜಡ ಇವುಗಳಿಂದ ಸದಾ ದುಃಖಮಯವೇ ಆಗಿತ್ತು.  ಬಹುಶಃ ಖಗೋಳವಿಜ್ಞಾನ ಮತ್ತು ವಿಜ್ಞಾನದ ಇಎರ ಭಾಗಗಳಲ್ಲಿನ ಅನ್ವೇಷಣೆಗಳೇ ಇವನ ಮಾನಸಿಕ ಸಮತೋಲವನ್ನು ಕಾಪಾಡಿಕೊಂಡು ಬರಲು ಸಹಕಾರಿಗಳಾದುವು.  ಮೊದಲನೆಯ ಹೆಂಡತಿ ಇವನಿಗೆ ಅನುಕೂಲೆಯಾಗಿರಲಿಲ್ಲ.  ಆಕೆಯಲ್ಲಿ ಜನಿಸಿದ ಕೆಲವು ಮಕ್ಕಳು ತೀರಿಕೊಂಡವು.  1611ರಲ್ಲಿ ಆಕೆಯೂ ಸತ್ತುಹೋದಳು.  1612ರಲ್ಲಿ ಕೆಪ್ಲರ್ ಪ್ರೇಗ್‍ನಿಂದ ಆಸ್ಟ್ರಿಯ ದೇಶದ ಲಿಂಟ್ಸ್ ನಗರಕ್ಕೆ ಹೊಸ ಹುದ್ದೆ ಹಿಡಿಯಲು ಸಾಗಿದ.  ಮರುವರ್ಷ (1613) ಎರಡನೆಯ ಮದುವೆ ಆಗಿ ತಕ್ಕಮಟ್ಟಿನ ಸಾಂಸಾರಿಕ ನೆಮ್ಮದಿ ಪಡೆದ.  ಮತೀಯ ವೈಷಮ್ಯಗಳ ದೆಸೆಯಿಂದ ಲಿಂಟ್ಸ್ ನಗರದಲ್ಲಿನ ವಾಸ ಅಸಹನೀಯವಾಯಿತು.  ಹೀಗಾಗಿ 1626ರಲ್ಲಿ ಅಲ್ಲಿಂದ ಈ ಕುಟುಂಬ ಹೊರಟು ಬೇರೆ ಬೇರೆ ಊರುಗಳಲ್ಲಿ ನೆಲೆ ಅರಸುತ್ತ ಅಲೆಯತೊಡಗಿತು.  ಈ ಮಧ್ಯೆ ಕೆಪ್ಲರ್ ಪ್ರೇಗ್‍ನಿಂದ ತನಗೆ ಬರಲು ಬಾಕಿ ಇದ್ದ ಸಂಬಳದ ದೊಡ್ಡ ಮೊತ್ತದ ಹಣವನ್ನು ಪಡೆಯಬೇಕೆಂದು ಸುದೀರ್ಘ ಪ್ರಯಾಣ ಮಾಡಿ ಆ ನಗರವನ್ನು ಸೇರಿದ.  ನವೆಂಬರಿನ ಆ ಚಳಿ, ಪ್ರಯಾಣದ ಆಯಾಸ, ಮಾನಸಿಕ ಅಸ್ವಾಸ್ಥ್ಯ ಇವೆಲ್ಲವೂ ಈ ಕೃಶಾಂಗನ ಮೇಲೆ ತೀವ್ರ ಪರಿಣಾಮ ಮಾಡಿದವು.  ರಾಜನ ದರ್ಬಾರಿಗೆ ಹೋಗಿ ತನ್ನ ನ್ಯಾಯಸಮ್ಮತ ಬೇಡಿಕೆಯನ್ನು ಸಕಾರಣವಾಗಿ ಮಂಡಿಸಿ ಮರಳಿದ ಕೆಪ್ಲರ್ ಮತ್ತೆ ಏಳಲಿಲ್ಲ.  ಕೆಪ್ಲರ್ ಅಸು ನೀಗಿದ್ದು 1630 ನವಂಬರ್ 15ರಂದು.

ಖಗೋಳ ವಿಜ್ಞಾನದ ವೀಕ್ಷಣೆಗಳ ಗೊಂಡಾರಣ್ಯದಲ್ಲಿ ಜ್ಞಾನದ ಬೆಳಕನ್ನು ಬೀರಿ ಮೂರು ಮಹಾಸೂತ್ರಗಳನ್ನು ಆವಿಷ್ಕರಿಸಿದ ಕೀರ್ತಿ ಕೆಪ್ಲರನದು.                                               
  (ಆರ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ